‘ಶಿಕ್ಷಣ ಸಂಘಟನೆ ಹೋರಾಟ’ ಇದು ಅಂಬೇಡ್ಕರ್‍ರವರು ದಲಿತರ ವಿಮೋಚನೆಗೆ ನೀಡಿದ ಮಾರ್ಗಸೂತ್ರ.
ಶತ ಶತಮಾನಗಳಿಂದ ಶಿಕ್ಷಣವನ್ನು ದಲಿತ ಮತ್ತು ಹಿಂದುಳಿದವರಿಗೆ ನಿಷೇಧಿಸಿದ್ದರು. ಆದರೆ ಜ್ಯೋತಿ ಭಾ ಪುಲೆರವರ ಹೋರಾಟದ ಫಲವಾಗಿ ಇಂಗ್ಲೀಷರ ಅನುಕಂಪದಿಂದಾಗಿ ದಲಿತ ಸಮುದಾಯಕ್ಕೆ ಶಿಕ್ಷಣದ ಬೆಳಕಿನ ಕಿರಣಗಳು ಸೂಸ ತೊಡಗಿದವು. ಅದಕ್ಕೆ ದಿವ್ಯ ಸಾಕ್ಷಿಯಾಗಿ ರೂಪುಗೊಂಡವರೆ ಅಂಬೇಡ್ಕರ್‍ರವರು. ಆದರೆ ನನಗೆ ಕಾಡುವ ಪ್ರಶ್ನೆಯೆಂದರೆ ದಲಿತರಿಗೆ ಶಿಕ್ಷಣ ಕೈಗೆಟುಕದ ಹುಳಿ ದಾಕ್ಷಿಯೇ ಆಗಿದೆ. ಇದು ಸರ್ಕಾರದ ಅಂಕಿ ಅಂಶಗಳೇ ಹೇಳುವಂತೆ ಗ್ರಾಮೀಣ ದಲಿತ ಮಹಿಳೆ ಉನ್ನತ ವ್ಯಾಸಂಗ ಮಾಡುತ್ತಿರುವುದು 9.75 ಮಾತ್ರ. ಅಂದರೆ ದಲಿತರಿಗೆ ಉನ್ನತ ಶಿಕ್ಷಣ ದೊರೆಯುತ್ತಿಲ್ಲ. ಅಲ್ಲದೆ ಸಾಮಾನ್ಯ ಶಿಕ್ಷಣವು ಸಹ ದೊರೆಯುತಿಲ್ಲ.
ಮನೆಯಲ್ಲಿರುವ ಆರ್ಥಿಕ ಸಮಸ್ಯೆಯಿಂದಾಗಿ ಕೂಲಿಯಾಗಿ ದುಡಿಯುವವರೆ ಹೆಚ್ಚಿದ್ದರೆ ಹೊರತು ಶಿಕ್ಷಣ ಪಡೆದುಕೊಳ್ಳುವ ದಲಿತರು ತುಂಬಾ ಕಡಿಮೆ ಇದ್ದಾರೆ. ಅಲ್ಲದೆ ಸರ್ಕಾರಗಳು ತುಂಬಾ ವ್ಯವಸ್ಥಿತ ರೀತಿಯಲ್ಲಿ ದಲಿತರನ್ನು ಶಿಕ್ಷಣದಿಂದ ದೂರ ಇಟ್ಟಿವೆ. ಜಾಗತೀಕರಣ ಮತ್ತು ಖಾಸಗೀಕರಣವನ್ನು ಹೆಚ್ಚು ಮಾಡಿ ಶಿಕ್ಷಣದ ಮೀಸಲಾತಿಯನ್ನು ಶಿಥಿಲಗೊಳಿಸುತ್ತಿವೆ. ಅಲ್ಲದೆ ಡಿ ಗ್ರೂಪ್ ನೌಕರಾಗಲು ಬೇಕಾಗುವ ಶಿಕ್ಷಣ ನೀಡುಲು ಮುಂದಾಗಿವೆ. ಅದೇ ದೊಡ್ಡ ಸಾಧನೆ ಎಂಬಂತೆ ಭೂತಕನ್ನಡಿಯಿಂದ ಬಿಂಬಸುತ್ತಿವೆ. ಸೂಕ್ತವಾದ ಶಿಕ್ಷಣದಿಂದಲೇ ವಂಚಿತವಾದ ದಲಿತರು ಇನ್ನೂ ಸಂಘಟನೆಯಲಿ ತೊಡಗುವುದು ಹೇಗೆ?
ಮತ್ತೊಂದು ಹುನ್ನಾರವೆಂದರೆ ಶಿಕ್ಷಣದಲ್ಲಿ ಅಳವಡಿಸುವ ಎಲ್ಲಾ ಪಠ್ಯ ವಿಷಯಗಳು ಜಾತಿವ್ಯವಸ್ಥೆಯ ಇರುವಿಕೆಯನ್ನು ಬಿಂಬಿಸಿ ಕನಿಷ್ಠರನ್ನು ಉನ್ನತವಾಗಿಯು ಉನ್ನತರನ್ನು ಕನಿಷ್ಠವಾಗಿ ಮಾಡುವಂತಹ, ಸುಳ್ಳನ್ನು ಸತ್ಯವೆಂದು ಬಲವಂತವಾಗಿ ನಂಬಿಸುವಂತಹ, ಕೆಲಸವನ್ನು ತುಂಬಾ ನಿಯತ್ತಿನಿಂದ ಮಾಡುತ್ತಾ ಬಂದಿವೆ. ಇಂತಹ ಶಿಕ್ಷಣದ ಪರಿಣಾಮವಾದ ದಲಿತ ವಿದ್ಯಾರ್ಥಿಗಳು ತಮ್ಮ ಸಮುದಾಯಗಳನ್ನೇ ಇನಾಯವಾಗಿ ನೋಡುವ, ಬ್ರಾಹ್ಮಣಿಕರಣವನ್ನು ಅನುಸರಿಸುವ, ರೂವಾರಿಗಳಾಗುತ್ತಿರುವುದು ಮುಂದಿನ ಅಪಾಯದ ಸೂಚನೆಗಳಾಗಿವೆ. ಶಿಕ್ಷಣ ಪಡೆದು ಹೊರಬಂದ ಯುವ ಜನ ಕೆಲವರು ಸೀಮಿತ ಪಠ್ಯದ ಜೊತೆ ಪೂರಕವಾದ ಸಾಹಿತ್ಯದ ಅರಿವನ್ನು ತಿಳಿದಂತಹವರು ತಮ್ಮ ಸಮುದಾಯ ಸಂಘಟನೆಗೆ ಮುಂದಾಗುತ್ತಿದ್ದಾರೆ. ಆದರೆ ಈ ಸಂಘಟನೆಯ ಹಂತದಲ್ಲಿಯು ತಮ್ಮ ಹಿತ್ತಾಶಕ್ತಿಯನ್ನು ಬಿತ್ತಿ ನಿಷ್ಕೀಯಗೊಳಿಸುತ್ತಿವೆ. ಸಂಘಟನೆಗೆ ಬೇಕಾದ ಆರ್ಥಿಕ ಸಹಾಯವನ್ನು ಪಟ್ಟಾಭದ್ರ ಹಿತಾಶಕ್ತಿಗಳೇ ಮಾಡಿ ಸಂಘಟಿಸಿದ ನಂತರ ಆ ಒಟ್ಟು ಸಂಘಟನೆಯನ್ನೇ ಕೊಂಡುಕೊಳ್ಳುವ ಕೆಲಸ ಮಾಡುತ್ತಿವೆ. ಅವರನ್ನು ಹಿಡಿತದಲ್ಲಿಟ್ಟುಕೊಂಡು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಕೆಲವು ಸಂಘಟನೆಗಳು ಸಿದ್ದಾಂತವನ್ನು ಗಾಳಿಗೆ ತೂರಿ ಪಕ್ಷಗಳು ತೋರಿದ ನಾಯಕತ್ವ, ಹಣ, ಉದ್ದಾರ ಇತ್ಯಾದಿ ಆಸೆ ಆಮಿಷಗಳಿಗೆ ಬಲಿಗೊಡುತ್ತಿದ್ದಾರೆ. ಇದರಿಂದ ದಲಿತರೆ ತಮ್ಮಂತೆ ತುಳಿತಕ್ಕೆ ಒಳಗಾಗಿರುವ ತಮ್ಮವರ ಬೆಳವಣಿಗೆಗೆ ತೊಡಕಾಗಿದ್ದಾರೆ. ಅಲ್ಲದೆ ಮೇಲ್ಜಾತಿಯವರು ಕೋಮುಗಲಭೆಗಳನ್ನು ಸೃಷ್ಟಿಸಲು ಸಂಘಟಿತ ದಲಿತ ಸಮುದಾಯವನ್ನು ಬಳಸಿಕೊಳ್ಳುತ್ತಿರುವುದು ದುರಂತವಾಗಿದೆ.
ಸಿದ್ದಾಂತಗಳನ್ನು ಗಾಳಿಗೆ ತೂರಿದ ಸಂಘಟನೆಗಳು ದಲಿತರ ಸಮಸ್ಯೆಗಳಿಗೆ ಕಿವಿಗೊಡದೆ ಸ್ವಾರ್ಥ ನಾಯಕತ್ವಕ್ಕೆ ಮೊರೆ ಹೊಗುತ್ತಿವೆ. ಅಲ್ಲದೆ ಬಹುಪಾಲು ಸಂಘಟನೆಗಳು ನಗರ ಭಾಗದಲ್ಲಿ ಕೇಂದ್ರಿಕೃತವಾಗಿವೆ. ಅವು ಬಹುಪಾಲು ಗ್ರಾಮೀಣ ದಲಿತರನ್ನು ನಿರ್ಲಕ್ಷಿಸಿರುವುದು ಮುಂದಿನ ವಿಫಲದ ಸೂಚಕವಾಗಿದೆ. ಇವೇ ಮುಂತಾದ ಸಮಸ್ಯೆಗಳ ಆಗರವಾಗಿರುವ ಸಂಘಟನೆಗಳು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಪರಿಸ್ಥಿತಿಯಲ್ಲಿ ಇಲ್ಲ. ಶಿಕ್ಷಣ ಮತ್ತು ಸಂಘಟನೆ ಎರಡೂ ದುರ್ಗಮ ಹಾದಿಯನ್ನು ಮೀರಿ ಬಂದಂತಹ ಕೆಲವು ಸಂಘಟನೆ ಅಥವಾ ವ್ಯಕ್ತಿಗಳು ಮಾತ್ರ ಹೋರಾಟದ ಹಂತದಲ್ಲಿದ್ದಾರೆ. ಇಂತಹ ಕೆಲವೇ ಕೆಲವು ಮಂದಿಯನ್ನು ಸದೆಬಡಿಯುವುದು ದೊಡ್ಡ ಸಮಸ್ಯೆಯೆಂದು ಕಂಡುಬಂದಿಲ್ಲ. ಏಕೆಂದರೆ ಹೋರಾಟದ ಹಂತಕ್ಕೆ ಬಂದಿರುವರಲ್ಲಿಯೂ ಅಪಾರ ಸಮಸ್ಯೆಗಳಿವೆ. ಹೋರಾಟದ ಮಾರ್ಗಗಳ ಬಗ್ಗೆ ಮತ್ತು ಅವುಗಳ ಯಶಸ್ವಿನ ಪ್ರಶಸ್ತಿಯನ್ನು ಪಡೆಯುವ ಬಗ್ಗೆ ವೈಮನಸ್ಸುಗಳಿವೆ. ಹೋರಾಟಗಾರರಿಗೆ ನ್ಯಾಯ ದೊರಕದ ರೀತಿಯಲ್ಲಿ, ಹಣ ದೊರಕದ ರೀತಿಯಲ್ಲಿ, ಅವರ ಮೇಲೆ ಆಕ್ರಮಣಗಳು ನಡೆಯುವ ರೀತಿಯಲ್ಲಿ, ಪಟ್ಟಭದ್ರಾ ಹಿತಾಶಕ್ತಿಗಳು ನೋಡಿಕೊಳ್ಳುತ್ತಿರುವುದರಿಂದ ಹೋರಾಟಗಾರರಿಗೆ ಮಾನಸಿಕ ಜಿಗುಪ್ಸೆ ಹಾಗೂ ಹೋರಾಟದ ನಿರಾಸಕ್ತಿ ಉಂಟಾಗಿದೆ. ಯುವ ಹೋರಾಟಗಾರರಿಗೆ ಹಣದ ಅಪಾರ ಅನಿವಾರ್ಯತೆ ಸೃಷ್ಟಿಸಿ ಪಟ್ಟಾಭದ್ರ ಹಿತಾಶಕ್ತಿಗಳು ಹಣವನ್ನು ನೀಡಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿವೆ.
ಇಂತಹ ದುರ್ಗಮ ಪರಿಸ್ಥಿತಿಯಲ್ಲಿ ಅಂಬೇಡ್ಕರ್‍ರ ಶಿಕ್ಷಣ ಸಂಘಟನೆ ಹೋರಾಟ ಯಶಸ್ವಿಯಾಗುವುದು ಹೇಗೆ?!
Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು